ಕೋನಿಫೆರೇಲಿಸ್

ಜಿಮ್ನೋಸ್ಪರ್ಮೆ ವರ್ಗದ (ನಗ್ನಬೀಜಿ ಸಸ್ಯವರ್ಗ) ಎರಡು ಪ್ರಮುಖ ಗಣಗಳಲ್ಲೊಂದು (ಇನ್ನೊಂದು ಸೈಕಡೇಲಿಸ್). ಇಂದು ಬದುಕಿರುವ ನಗ್ನಬೀಜಿ ಸಸ್ಯಗಳ ಸಂಖ್ಯೆಯನ್ನು ಗಮನಿಸಿದರೆ ಈ ಗಣವೇ ಅತಿದೊಡ್ಡದೆಂದು ಹೇಳಬಹುದು; ಇದರಲ್ಲಿ 7 ಕುಟುಂಬಗಳೂ ಅವಕ್ಕೆ ಸೇರಿದಂತೆ 52 ಜಾತಿ ಹಾಗೂ 570 ಪ್ರಭೇದಗಳೂ ಇವೆ. ಜಿಮ್ನೋಸ್ಪರ್ಮ್ ಗುಂಪಿನಲ್ಲಿ ಈ ಗಣದ ಸಸ್ಯಗಳೇ ಬಹಳ ಮುಖ್ಯವಾದವು. ಪ್ರಾಚೀನ ಹಾಗೂ ಮಧ್ಯಯುಗಗಳಲ್ಲಿ ಇವು ಅತಿಯಾಗಿ ಬೆಳೆಯುತ್ತಿದ್ದುವು. ಈಗಿನ ಯುಗದಲ್ಲಿ ಇವುಗಳ ಸಂಖ್ಯೆ ಬಹಳ ಕಡಿಮೆ. ಈ ಸಸ್ಯಗಳ ಬೆಳೆವಣಿಗೆ ಎಷ್ಟು ವಿಸ್ಮಯಕಾರಿಯೊ ಈಗ ಉಳಿದಿರುವ ಸಸ್ಯಗಳ ವ್ಯಾಪ್ತಿಯೂ ಅಷ್ಟೆ ಕುತೂಹಲಕಾರಿ. ಇವು ಸಾಮಾನ್ಯವಾಗಿ ಸಮಶೀತೋಷ್ಣವಲಯಗಳಲ್ಲೂ ಉಷ್ಣವಲಯಗಳ ಪರ್ವತಪ್ರದೇಶಗಳಲ್ಲೂ ಹೆಚ್ಚಾಗಿ ಬೆಳೆಯುತ್ತವೆ. ಹಿಮಾಲಯ ಪರ್ವತದಲ್ಲಿ ಬಲುಸಾಮಾನ್ಯ. ಸದಾ ಹಸಿರಾಗಿದ್ದು ಪೊದೆಗಳ ರೂಪದಲ್ಲೊ ಮರಗಳ ರೂಪದಲ್ಲೊ ಬೆಳೆದುಕೊಳ್ಳುತ್ತವೆ. ಈ ಮರಗಳು ಸಸ್ಯಪ್ರಪಂಚದಲ್ಲೆ ಅತಿ ಎತ್ತರವಾದವು ಎಂದು ಹೇಳಬಹುದು. (ಉದಾಹರಣೆಗೆ ಉತ್ತರ ಅಮೆರಿಕದ ಕ್ಯಾಲಿಪೋರ್ನಿಯದಲ್ಲಿ ಬೆಳೆಯುವ ಸೆಕೋಯಿದು ಎಂಬುದು 400'ಗಳಿಗೂ ಮೀರಿ ಬೆಳೆಯುತ್ತದೆ.) ಇವುಗಳ ಬೆಳೆವಣಿಗೆಯಲ್ಲಿ ಒಂದು ನಿರ್ದಿಷ್ಟರೂಪವನ್ನು ಕಾಣುತ್ತೇವೆ; ರೆಂಬೆಗಳು ಪ್ರತಿವರ್ಷ ಹೊಸದಾಗಿ ಹುಟ್ಟುವಾಗ ಕಾಂಡದ ಗೆಣ್ಣಿನ ಸುತ್ತಲೂ ಹೊರಡುತ್ತವೆ. ಹಳೆಯ ರೆಂಬೆಗಳು ಉದ್ದವಾಗಿದ್ದು ಮರದ ತುದಿ ಕಡೆ ಹೋದಂತೆಲ್ಲ ರೆಂಬೆಗಳ ಉದ್ದ ಕ್ರಮೇಣ ಕಡಿಮೆಯಾಗುತ್ತ ಬರುತ್ತದೆ. ಇದರಿಂದಾಗಿ ಮರ ಶಂಕುವಿನಾಕಾರದಲ್ಲಿರುತ್ತದೆ. ಆದ್ದರಿಂದಲೆ ಇವಕ್ಕೆ ಕೋನಿಫರ್ಸ್ ಎಂದು ಹೆಸರು. ಸಸ್ಯದ ವಯಸ್ಸನ್ನು ರೆಂಬೆಯ ಸುತ್ತುಗಳು ಎಷ್ಟಿವೆ ಎಂಬುದನ್ನು ನೋಡಿ ಹೇಳಬಹುದು. ವಯಸ್ಸಾದ ಅನಂತರ ಕೊಂಬೆಗಳು ಬಿದ್ದುಹೋಗುತ್ತವೆ. ಉದ್ದನೆಯ ರೆಂಬೆಗಳ ಮೇಲೆ ಹೆಚ್ಚು ಬೆಳೆವಣಿಗೆ ಇಲ್ಲದ ಇನ್ನೊಂದು ರೀತಿಯ ಕುಬ್ಜ ರೆಂಬೆಗಳು ಬೆಳೆದುಕೊಳ್ಳುತ್ತವೆ. ಒಂದು ರೀತಿಯ ನೀಳವಾದ ಸೂಜಿಯಾಕಾರದ ಎಲೆಗಳು ಹುಟ್ಟುವುದು ಇವುಗಳ ಮೇಲೆಯೇ. ಅಲ್ಲದೆ ಎರಡು ರೀತಿಯ ರೆಂಬೆಗಳ ಮೇಲೂ ಇನ್ನೊಂದು ರೀತಿಯ ಎಲೆಗಳನ್ನು ನೋಡಬಹುದು. ಇವೇ ಕಂದು ಬಣ್ಣದ ಹುರುಪೆ ಎಲೆಗಳು. ಸೂಜಿಯ ಆಕಾರದ ಎಲೆಗಳು ಮಾತ್ರ ಆಹಾರ ತಯಾರಿಕೆಯ ಕ್ರಿಯೆಯನ್ನು ನಿರ್ವಹಿಸುತ್ತವೆ. ಕೋನಿಫೆರೇಲಿಸ್ ಗುಂಪಿನ ಸಸ್ಯಗಳ ಒಳಭಾಗಗಳನ್ನು ಪರೀಕ್ಷಿಸಿದರೆ ಜೀóರೋಫೈಟ್ ಸಸ್ಯಗಳ ಗುಣಗಳನ್ನು ಕಾಣಬಹುದು.

ಈ ಸಸ್ಯಗಳ ಹೂಗಳು ಶಂಕುವಿನಾಕಾರದ ರಚನೆಗಳಲ್ಲಿ ಜೋಡಣೆಯಾಗಿರುತ್ತವೆ. ಆ ರಚನೆಗಳಿಗೆ ಶಂಕುಗಳು (ಕೋನ್ಸ್) ಅಥವಾ ಸ್ಟ್ರೊಬೈಲಿ ಎಂದು ಹೆಸರು. ಒಂದು ಶಂಕುವಿನಲ್ಲಿ ಗಂಡು ಅಥವಾ ಹೆಣ್ಣು ಹೂಗಳು ಮಾತ್ರ ಇರುತ್ತವೆ. ಅಪವಾದವಾಗಿ ಗಂಡುಹೆಣ್ಣುಹೂಗಳೆರಡೂ ಒಂದರಲ್ಲೇ ಇರಬಹುದು (ಉದಾಹರಣೆಗೆ ಏಬಿಸ್, ಲಾರಿಕ್ಸ್, ಪೈಸಿಯ). ಗಂಡುಶಂಕು ಹೆಣ್ಣಿಗಿಂತ ಗಾತ್ರದಲ್ಲಿ ಚಿಕ್ಕದು. ಗಂಡುಹೂವಿನಲ್ಲಿ ಉತ್ಪಾದನೆಯಾಗುವ ಪರಾಗ ದೂಳಿನಕಣದ ರೂಪದಲ್ಲಿದ್ದು ಗಾಳಿಯ ಮೂಲಕ ಪ್ರಸಾರವಾಗುತ್ತವೆ. ಈ ಬಗೆಯ ಪ್ರಸರಣಕ್ಕೆ ಸಹಾಯಕವಾಗುವಂತೆ ಪರಾಗದಲ್ಲಿ ರೆಕ್ಕೆಯ ರೂಪದ ಬೆಳೆವಣಿಗೆಯನ್ನು ಸಹ ನೋಡಬಹುದು. ಪರಾಗ ಕಣಗಳು ಗಾಳಿಯ ಮೂಲಕ ಪ್ರಸಾರವಾಗುವುದರಿಂದ ಅವುಗಳಲ್ಲಿ ಬಹುಪಾಲು ನಷ್ಟವಾಗುವ ಸಂಭವವಿದೆ. ಈ ರೀತಿಯ ನಷ್ಟವನ್ನು ಸರಿದೂಗಿಸಲು ಪರಾಗ ಹೆಚ್ಚು ಮೊತ್ತದಲ್ಲಿ ಉತ್ಪತ್ತಿಯಾಗುತ್ತದೆ. ಗಾಳಿಯಲ್ಲಿ ಪರಾಗ ಪ್ರಸಾರವಾಗುವ ಸಮಯಕ್ಕೆ ಸರಿಯಾಗಿ ಹೆಣ್ಣುಹೂಗಳಿರುವ ಶಂಕುಗಳು ಅರಳುತ್ತವೆ. ಒಂದೊಂದು ಹೆಣ್ಣು ಹೂವಿನಲ್ಲೂ ಒಂದೊಂದು ಅಂಡಕಧರ ಪಟ್ಟಿಯಿದ್ದು ಅದರ ಕಂಕುಳಲ್ಲಿ ಒಂದು ಅಂಡಕವಿದೆ. ಅಂಡಕದ ತುದಿಯಲ್ಲಿ ಒಂದು ಬಗೆಯ ಅಂಟುದ್ರವ ಒಸರುತ್ತದೆ. ಪರಾಗ ಅಂಡಕಕ್ಕೆ ಅಂಟಿಕೊಳ್ಳಲು ಇದು ಸಹಾಯಕ. ಈ ಗುಂಪಿನ ಸಸ್ಯಗಳಲ್ಲಿ ಗರ್ಭಧಾರಣೆ ಕ್ರಿಯೆ ಬಲು ನಿಧಾನವಾಗಿ ಆಗುತ್ತದೆ.

ಕೋನಿಫೆರೇಲಿಸ್ ಗುಂಪಿನಸಸ್ಯಗಳಿಗೆ ಆರ್ಥಿಕ ಪ್ರಾಮುಖ್ಯ ಉಂಟು. ಇವುಗಳಿಂದ ದಿಮ್ಮಿಗಳು, ರೆಸಿನ್, ಎಣ್ಣೆ, ಟರ್ಪಂಟೈನ್, ಗೋಂದು ಮುಂತಾದವುಗಳನ್ನು ಪಡೆಯಬಹುದು. ಕೆಲವು ಬಗೆಗಳು ಔಷದ ರೂಪದಲ್ಲೂ ಉಪಯೋಗಕ್ಕೆ ಬರುತ್ತವೆ.        													(ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ